Sunday, January 6, 2013

ದುಡಿಯುವ ಮಹಿಳೆ ಸಬಲೆಯೇ??

ಅದು ಎಂದಿನಂತೆಯೇ ಒಂದು ದಿನ..ಅಜ್ಜಿ ಬಂದಿದ್ದರು..ಅಜ್ಜಿ ಅಂದರೆ ಸಾಕಾಗದು..ಹುಣಸೇಕೊಪ್ಪದ ಅಜ್ಜಿ,ಕಥೆ,ಹಳೇ ಹಾಡುಗಳ ಉಗ್ರಾಣ ಎಂದರೆ ನಿಮಗೂ ಅರ್ಥವಾದೀತು..ಮಾತು ಮಾತಾಡುತ್ತಾ ಅಜ್ಜಿ ಕೇಳಿದೆ..
"ನೀವು ಮೊನ್ನೆ ಯು ಸ್ ಎ ಹೋಗಿದ್ದ ಕಥೆ ಹೇಳ್ತೀನಿ ಅಂದ್ರಿ ಹೇಳಲೇ ಇಲ್ಲ",
ಅಜ್ಜಿ ,
"ಹೇಳ್ತೆ ತಡೆ...ಅದಕ್ಕಿಂತ ಮೊದ್ಲು ನಿನ ಕಥೆ ಕೇಳನ..ಹೇಳು..ಆ ಶಣ್ಣ ಪಾಪುನಾ ಕಂಡವರ ಕೈಲಿ ಬಿಟ್ಟೂ ಕೆಲಸಕ್ಕೆ ಯಾಕೆ ಹೊಂಟೆ??ನಿಂಗೆ  ಎಂತು ಕಮ್ಮಿ ಮನೇಲಿದ್ದು ಕೆಲ್ಸ ಮಾಡ್ಕಂಡು ಹೋಗಕ್ಕೆ??"
ನಂಗೆ ಗೊತ್ತಿತ್ತು ಈ ಪ್ರಶ್ನೆ ಬಂದೇ ಬರುತ್ತೆ ಅಂತ,
ಹೇಳಬಹುದಿತ್ತು,
ನನಗೆ ಇಷ್ಟ ಇಲ್ಲ,ಆದರೆ ಅನಿವಾರ್ಯತೆ ಅಂತ,
ಆದರೆ ಸತ್ಯ ಸಂಗತಿ ತಿಳಿದರೆ ನನ್ನವನಿಗೂ ಸೇರಿಸಿ ಬೈದಾರು ಅನ್ನೋ ಭಯ,
ಅದಕ್ಕೆ "ನನ್ನಿಷ್ಟ ಅಂತ ಸೇರಿಕೊಂಡೆ..ಅದಕ್ಕೆ ಇದಕ್ಕೆ ಅಂತ ನನ್ನ ಪುಟ್ಟ ಪುಟ್ಟ ಕರ್ಚಿಗೂ ಅವನ  ಮುಂದೆ ಕೈ ಚಾಚಬೇಕಲ್ಲಾ,ಅದು ಹಂಗು ಅನಿಸ್ತದೆ ,ಬೇಡ ಅಂತ"
"ಅದಕ್ಕೆ?? ಹಂಗು ಹೆಂಗಾಗ್ತು ಮಗಳೇ,ನೀ ಮನೇಲಿ ಮಕ್ಕಳನ್ನ ಗಂಡನ್ನ ನೊಡ್ಕಂಡು ಹೋಗದು ಏನು ಕಮ್ಮಿ ಕೆಲಸಾನಾ??ಕಂಡವರ ಕೈಲಿ ಮಕ್ಕಳನ್ನ ಬಿಡ್ತೆ,ಅವು ತಿನ್ನಿಸ್ತ್ವಾ,ಚೆನಾಗ್ ನೊಡ್ತ್ವಾ ಎಂತ ಗ್ಯಾರಂಟೀ??"
ನನ್ನಿಂದ ಮಾತಿಲ್ಲ...
ಹೌದಲ್ಲ..ಮಾತಾಡಲು ಸಾಧ್ಯವಿಲ್ಲ...
ಸತ್ಯ ಕಣ್ಣೆದುರಿಗೆ ಇರುವಾಗ??ಮನೆ ಕೆಲಸವೇನು ಕಮ್ಮಿ ಕೆಲಸವೇ??ಕಣ್ಣಿಗೆ ಕಾಣಿಸದು ಅಷ್ಟೇ...
"ನಂಗೆ ಗೊತ್ತು,ನೀ ಎಂತಕ್ಕೆ ಹೇಳ್ತಾ ಇಲ್ಲೆ ಅಂತ..ಅವನ ವಹಿಸ್ಕಂಡು ಬಂದದ್ದು ಅತೀ ಆತು ಮಗಳೆ..ನೋಡು..ನಮ್ಮ ಕಾಲದಲ್ಲಿ ನಂಗ ಅಡಿಗೆ ಮಾಡ್ಕಂಡು,ಮಕ್ಕಳ ಒಗಾತಿ ನೋಡ್ಕಂಡು,ಗಂಡನ ಕೆಲಸದಲ್ಲಿ ಸಮನಾಗಿ ಭಾಗಿ ಆಗ್ತಿದ್ಯ..ಅವಾಗ ಈ ಮೇಲಾಟ ಎಲ್ಲಾ ಇರ್ಲೆ,ಈಗ ಮಗಳೇ,ನೀ ಹೊರಗೂ ಸುಸ್ತಾಗಿ ಬಂದು ಮನೇ ಕೆಲಸಾನೂ ಮಾಡಕ್ಕು,ಮಗನ್ನ ಆಸೆ ಪ್ರೀತಿ ಎಲ್ಲಾ ಹಕ್ಕು ಕಿತ್ಕಂಡ್ ನಾ ದುಡೀತಿದ್ದಿ ಅಂದ್ರೆ ಅದ್ಯಾವ ತರದ ಸ್ವಾತಂತ್ರ..ನಿನ್ನ ಆರ್ಥಿಕ ಸ್ವಾತಂತ್ರದ ನೆಪದಲ್ಲಿ ಹಳ್ಳಕ್ಕೆ ನಿಮ್ಮನ್ನ ದೂಡ್ತಾ ಇರೋದು ಈ ಸಮಾಜ..ನೀ ಎಂತದ್ದೇ ಹೇಳು..ನಿಜ್ವಾಗ್ಲೂ ದುಡಿಯೋ ಹೆಣ್ಣು ಶೋಷಿತಳು"
ಅಜ್ಜಿಯ ಮಾತು ಕೇಳಿ ನನಗೆ ಅನ್ನಿಸಿದ್ದು ಒಂದೆ ...ಹೇಳಿ..ನಾವು ದುಡಿಯುವ ಮಹಿಳೆಯರು ಸಬಲೆಯರೇ??