Sunday, February 10, 2013

ಸಖಿಯರಿಗೆ ಸಲಹೆಗಳು

ಕೆಲಸ ಮುಗಿಸಿ ಮನೆಗೆ ಬರುತ್ತಿದ್ದೆ...ದಾರಿಯಲ್ಲಿ ಆಕೆ ಸಿಕ್ಕರು..ಮಾತು ಮಾತಲ್ಲೇ ಆಕೆ ತನ್ನ ಸಮಸ್ಯೆಗಳನ್ನೆಲ್ಲಾ ಹೇಳಿಕೊಂಡರು..ನಾನು ತಾಳ್ಮೆ ಇಂದ ಕೇಳಿಸಿಕೊಂಡೆ..
"ಶಮ್ಮಿ, ನಂಗೆ ಇತ್ತೀಚೆಗೆ ಶುಗರ್ ಶುರು ಆಗಿದೆ ಅಂತ ಭಯ ಕಣ್ರೀ,ತೂಕ ಬೇರೆ ಒಂದೇ ಸವನೆ ಜಾಸ್ತಿ ಆಗ್ತಿದೆ.ಏನು ಮಾಡೋದು ಗೊತ್ತಾಗ್ತಿಲ್ಲ...ಯಾವುದರಲ್ಲೂ ಆಸಕ್ತಿ ಇಲ್ಲ.." ನಾನು ಸಮಧಾನ ಹೇಳಿದ ಮೇಲೆ ಆಕೆ ಹೋದದ್ದು
ಆಕೆಯ ವಯಸ್ಸು ಹೆಚ್ಚೆಂದರೆ ೪೦ ಇರಬಹುದು.ಆಕೆಯೇಕೆ,ನನ್ನ ಅಕ್ಕ-ಪಕ್ಕದ ಮನೆಯವರದ್ದೆಲ್ಲಾ  ಇದೇ ವರಾತವೇ..
ನನ್ನ ಅಕ್ಕಂದಿರೇ,ತಂಗಿಯರೇ..ನಿಮಗೊಂದಷ್ಟು ಉಪಯುಕ್ತ ಸಲಹೆಗಳು ಇಲ್ಲಿವೆ..ಪಾಲಿಸಿದರೆ ನಿಮಗೇ ಒಳ್ಳಿತು..
೧) ೩೦ ದಾಟಿದ ನಂತರ ಪ್ರತಿ ವರುಷಕ್ಕೊಮ್ಮೆ ತಪ್ಪದಂತೆ ತಪಾಸಣೆ ಮಾಡಿಸಲೇಬೇಕು
೨)ಮನೆಯ ಕೆಲಸ ಈಗ ಮುಂಚಿನಂತೆ ಕಷ್ಟವಲ್ಲ. ಗಂಡ ಮಕ್ಕಳನ್ನು ಕಳುಹಿಸಿದ ಮೇಲೆ ಉಳದಿರುವ ಚೂರು ಪಾರು ಕೆಲಸ ಮುಗಿಸಿ ಧಾರಾವಾಹಿ ನೋಡುತ್ತೀರಿ..ಅದರ ಬದಲು ಒಂದಷ್ಟು ನಿಮ್ಮ ಮನಸ್ಸಿಗ ಮುದ ತರುವ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ
೩)ದಿನಾ ಬೆಳಗ್ಗೆ ಎದ್ದು ಪಕ್ಕದ ಮನೆಯ ಗೆಳತಿಯ ಜೊತೆ ವಾಕಿಂಗು ಅಂತ ಹೋಗುತ್ತೀರಿ..ಸರಿಯೇ..ಆದರೆ ಅಲ್ಲಿ ವಾಕಿಂಗಿಗಿಂತ ಮಾತಾಡುವದೇ ಜಾಸ್ತಿ..ಆದಷ್ಟು ಮೌನವಾಗಿ ನಡೆವುದನ್ನ ಅಭ್ಯಾಸ ಮಾಡಿ
೪)ಮನೆಯಲ್ಲೇ  ಇದ್ದೀನಿ  ಹೇಗೆ ಇದ್ದರೇನು ಅನ್ನೋ ತಾತ್ಸಾರ ಬೇಡ,ಸ್ವಂತ ಕುಶಿಗಾದರೂ ಅಲಂಕರಿಸಿಕೊಳ್ಳಿ, ನಿಮ್ಮ ದೇಹ ವಯಸ್ಸಿಗೆ ಒಪ್ಪುವ ಉಡುಗೆ ತೊಡುಗೆ ಹಿತವಾದ ಅಲಂಕಾರವಿರಲಿ
೫)ಮನೆಯಲ್ಲಿ ಮಿಕ್ಕಿದ್ದನ್ನೆಲ್ಲಾ ತಿನ್ನಲು ನೀವು ಕಸದಬುಟ್ಟಿಯಲ್ಲ...ತಿನ್ನುವುದರ ಮೇಲೆ ಗಮನವಿರಲಿ..ಅಚ್ಚುಕಟ್ಟಾಗಿ ಅಡಿಗೆ ಮಾಡಿದರೆ ರುಚಿಕರವಾಗೂ ಇರುತ್ತದೆ.  ದಂಡವೂ ಆಗುವುದಿಲ್ಲ..
೬)ಕಂಡವರನ್ನು ನೋಡಿ  ಕರುಬವುದು, ಆಡಿಕೊಳ್ಳುವದನ್ನ ಬಿಟ್ಟುಬಿಡಿ..ಇದರಿಂದ ಮತ್ತಷ್ಟು ಶಾಂತಿ ಹೆಚ್ಚಾದೀತೇ ಹೊರತು ಬೇರೆ  ಉಪಯೋಗ ಇಲ್ಲ
೭)ಗಂಡ ಮನೆಗೆ ಬರುತ್ತಿದ್ದ ಹಾಗೆ ಅದು-ಇದು ಸುದ್ದಿ ತೆಗೆದು ಬೇಸರಿಸಬೇಡಿ..ನಗುನಗುತ್ತಾ  ಮಾತಾಡದಾ ಕೆಲಸದ ಆಯಾಸ ಅವರಿಗೆ ಪರಿಹಾರ ಆದಂತಾಗುತ್ತೆ.
೮)ಹಿತವಾದ ಹಾಸ್ಯವನ್ನ ಬದುಕಿನಲ್ಲ ಅಳವಡಿಸಿಕೊಳ್ಳಿ..


Sunday, January 6, 2013

ದುಡಿಯುವ ಮಹಿಳೆ ಸಬಲೆಯೇ??

ಅದು ಎಂದಿನಂತೆಯೇ ಒಂದು ದಿನ..ಅಜ್ಜಿ ಬಂದಿದ್ದರು..ಅಜ್ಜಿ ಅಂದರೆ ಸಾಕಾಗದು..ಹುಣಸೇಕೊಪ್ಪದ ಅಜ್ಜಿ,ಕಥೆ,ಹಳೇ ಹಾಡುಗಳ ಉಗ್ರಾಣ ಎಂದರೆ ನಿಮಗೂ ಅರ್ಥವಾದೀತು..ಮಾತು ಮಾತಾಡುತ್ತಾ ಅಜ್ಜಿ ಕೇಳಿದೆ..
"ನೀವು ಮೊನ್ನೆ ಯು ಸ್ ಎ ಹೋಗಿದ್ದ ಕಥೆ ಹೇಳ್ತೀನಿ ಅಂದ್ರಿ ಹೇಳಲೇ ಇಲ್ಲ",
ಅಜ್ಜಿ ,
"ಹೇಳ್ತೆ ತಡೆ...ಅದಕ್ಕಿಂತ ಮೊದ್ಲು ನಿನ ಕಥೆ ಕೇಳನ..ಹೇಳು..ಆ ಶಣ್ಣ ಪಾಪುನಾ ಕಂಡವರ ಕೈಲಿ ಬಿಟ್ಟೂ ಕೆಲಸಕ್ಕೆ ಯಾಕೆ ಹೊಂಟೆ??ನಿಂಗೆ  ಎಂತು ಕಮ್ಮಿ ಮನೇಲಿದ್ದು ಕೆಲ್ಸ ಮಾಡ್ಕಂಡು ಹೋಗಕ್ಕೆ??"
ನಂಗೆ ಗೊತ್ತಿತ್ತು ಈ ಪ್ರಶ್ನೆ ಬಂದೇ ಬರುತ್ತೆ ಅಂತ,
ಹೇಳಬಹುದಿತ್ತು,
ನನಗೆ ಇಷ್ಟ ಇಲ್ಲ,ಆದರೆ ಅನಿವಾರ್ಯತೆ ಅಂತ,
ಆದರೆ ಸತ್ಯ ಸಂಗತಿ ತಿಳಿದರೆ ನನ್ನವನಿಗೂ ಸೇರಿಸಿ ಬೈದಾರು ಅನ್ನೋ ಭಯ,
ಅದಕ್ಕೆ "ನನ್ನಿಷ್ಟ ಅಂತ ಸೇರಿಕೊಂಡೆ..ಅದಕ್ಕೆ ಇದಕ್ಕೆ ಅಂತ ನನ್ನ ಪುಟ್ಟ ಪುಟ್ಟ ಕರ್ಚಿಗೂ ಅವನ  ಮುಂದೆ ಕೈ ಚಾಚಬೇಕಲ್ಲಾ,ಅದು ಹಂಗು ಅನಿಸ್ತದೆ ,ಬೇಡ ಅಂತ"
"ಅದಕ್ಕೆ?? ಹಂಗು ಹೆಂಗಾಗ್ತು ಮಗಳೇ,ನೀ ಮನೇಲಿ ಮಕ್ಕಳನ್ನ ಗಂಡನ್ನ ನೊಡ್ಕಂಡು ಹೋಗದು ಏನು ಕಮ್ಮಿ ಕೆಲಸಾನಾ??ಕಂಡವರ ಕೈಲಿ ಮಕ್ಕಳನ್ನ ಬಿಡ್ತೆ,ಅವು ತಿನ್ನಿಸ್ತ್ವಾ,ಚೆನಾಗ್ ನೊಡ್ತ್ವಾ ಎಂತ ಗ್ಯಾರಂಟೀ??"
ನನ್ನಿಂದ ಮಾತಿಲ್ಲ...
ಹೌದಲ್ಲ..ಮಾತಾಡಲು ಸಾಧ್ಯವಿಲ್ಲ...
ಸತ್ಯ ಕಣ್ಣೆದುರಿಗೆ ಇರುವಾಗ??ಮನೆ ಕೆಲಸವೇನು ಕಮ್ಮಿ ಕೆಲಸವೇ??ಕಣ್ಣಿಗೆ ಕಾಣಿಸದು ಅಷ್ಟೇ...
"ನಂಗೆ ಗೊತ್ತು,ನೀ ಎಂತಕ್ಕೆ ಹೇಳ್ತಾ ಇಲ್ಲೆ ಅಂತ..ಅವನ ವಹಿಸ್ಕಂಡು ಬಂದದ್ದು ಅತೀ ಆತು ಮಗಳೆ..ನೋಡು..ನಮ್ಮ ಕಾಲದಲ್ಲಿ ನಂಗ ಅಡಿಗೆ ಮಾಡ್ಕಂಡು,ಮಕ್ಕಳ ಒಗಾತಿ ನೋಡ್ಕಂಡು,ಗಂಡನ ಕೆಲಸದಲ್ಲಿ ಸಮನಾಗಿ ಭಾಗಿ ಆಗ್ತಿದ್ಯ..ಅವಾಗ ಈ ಮೇಲಾಟ ಎಲ್ಲಾ ಇರ್ಲೆ,ಈಗ ಮಗಳೇ,ನೀ ಹೊರಗೂ ಸುಸ್ತಾಗಿ ಬಂದು ಮನೇ ಕೆಲಸಾನೂ ಮಾಡಕ್ಕು,ಮಗನ್ನ ಆಸೆ ಪ್ರೀತಿ ಎಲ್ಲಾ ಹಕ್ಕು ಕಿತ್ಕಂಡ್ ನಾ ದುಡೀತಿದ್ದಿ ಅಂದ್ರೆ ಅದ್ಯಾವ ತರದ ಸ್ವಾತಂತ್ರ..ನಿನ್ನ ಆರ್ಥಿಕ ಸ್ವಾತಂತ್ರದ ನೆಪದಲ್ಲಿ ಹಳ್ಳಕ್ಕೆ ನಿಮ್ಮನ್ನ ದೂಡ್ತಾ ಇರೋದು ಈ ಸಮಾಜ..ನೀ ಎಂತದ್ದೇ ಹೇಳು..ನಿಜ್ವಾಗ್ಲೂ ದುಡಿಯೋ ಹೆಣ್ಣು ಶೋಷಿತಳು"
ಅಜ್ಜಿಯ ಮಾತು ಕೇಳಿ ನನಗೆ ಅನ್ನಿಸಿದ್ದು ಒಂದೆ ...ಹೇಳಿ..ನಾವು ದುಡಿಯುವ ಮಹಿಳೆಯರು ಸಬಲೆಯರೇ??

Thursday, November 13, 2008

ಚಳಿಗಾಲ ಬಂದಿದೆ......

ಚುಮು ಚುಮು ಚಳಿ, ಬೆಳಗ್ಗೆ ಏಳೋದಿರಲಿ ,ಈ ಬೆಳಗ್ಗೆ ಅನ್ನೋದೆ ಯಾಕ್ ಬಂತಪ್ಪಾ ಅನ್ನಿಸ್ತಿರುತ್ತೆ,ಅಲ್ವಾ? ಕೆಳಗಿನ ಸಣ್ಣ ಸಣ್ಣ ಟಿಪ್ಸ್ ನಿಮಗಾಗಿ,ಚಳಿಗಾಲದ ನಿಮ್ಮ ಬೆಳಗನ್ನು ಸುಂದರವಾಗಿಸಲು!!

ಒಂದು- ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಒಮ್ಮೆಗೇ ಎದ್ದು ನಿಲ್ಲುವ ಬದಲು ಒಂದು ನಿಮಿಷ ಕೂತು ಉಸಿರಾಟದ ಗತಿಯನ್ನು ಗಮನಿಸಿ,ನಂತರ ಎರಡೂ ಕೈಗಳನ್ನು ಉಜ್ಜಿ ಕಣ್ಣಿನ ಮೇಲೆ ಮೃದುವಾಗಿ ಇಟ್ಟು ನಂತರ ಏಳಿ.
ಎರಡು-ಬ್ರಷ್ ಆದ ನಂತರ ಮುಖವನ್ನು ಯಾವುದೇ ಸೋಪಿನಿಂದ ಉಜ್ಜಬೇಡಿ,ಇದರಿಂದ ಚರ್ಮ ಒಡೆಯಬಹುದು!!ಬರೀ ನೀರಷ್ಟೇ ಉಪಯೋಗಿಸಿ, ಅದೂ ಒಂದು ಬಾರಿ ಮೃದುವಾಗಿ ತೊಳೆದರೆ ಸಾಕು
ಮೂರು-ಒಂದು ಲೋಟ ಬಿಸಿ ನೀರಿಗೆ ಒಂದು ತೊಟ್ಟು ಜೇನು ಮತ್ತು ನಿಂಬೇರಸ ಹಾಕಿ ಕುಡಿಯಿರಿ,ಇದು ರಕ್ತವನ್ನು ಶುದ್ಧೀಕರಿಸುತ್ತದೆ ಹಾಗೂ ದೇಹದಲ್ಲಿ ಬಿಸಿಯುಂಟು ಮಾಡುತ್ತದೆ.ಪಚನ ಕ್ರಿಯೆಗೂ ಸಹಕರಿಸುತ್ತದೆ.
ನಾಲ್ಕು- ವಾಕಿಂಗ್ ಅಥ್ವಾ ಜಾಗಿಂಗ್,ಯಾವ್ದೇ ಇರಲಿ ಬಿಡ್ಬೇಡಿ,ಚಳಿಗಾಲ ಓಡಿಸೋದಿಕ್ಕೆ ಇದು ಒಳ್ಳೇ ಉಪಾಯ.
ಐದು-ಮೇಕಪ್ ಜಾಸ್ತಿ ಹಾಕ್ಬೇಡಿ,ಆದ್ರೆ ಸನ್-ಸ್ಕ್ರೀನ್ ಲೋಶನ್ ಮತ್ತು ಬಾಡಿ ಲೋಶನ್ ಮಾತ್ರ ಹಚ್ಕೊಳ್ಳಲೇ ಬೇಕು.ಕಾಜಲ್ ಮತ್ತು ಲಿಪ್-ಬಾಮ್ ಹಾಕ್ಬಹುದು.
ಆರು-ದಿನವಿಡೀ ೮ ದೊಡ್ಡ ಲೋಟಗಳಷ್ಟಾದ್ರು ನೀರನ್ನ ಕುಡಿಯಿರಿ,ಹಾಗೇ ಮಲಗೋಕ್ಕೆ ಮುಂಚೆ ಒಂದು ಲೋಟ ಬಿಸಿ ನೇರು ಅಥ್ವಾ ಬಿಸಿ ಹಾಲು ವಿಥ್ ಜೇನುತುಪ್ಪ.
ಏಳು-ಹಾಗೇ ಹಣ್ಣುಗಳ ಫೇಸ್ ಪ್ಯಾಕ್ ವಾರಕ್ಕೊಮ್ಮೆ,ಉತ್ತಮ ಆಹಾರ(ಫೈಬರ್ ಉಳ್ಳ),ಎಣ್ಣೆ ಸ್ನಾನ ವಾರಕ್ಕೊಮ್ಮೆ ಇದನ್ನ ಮರಿಲೇಬೇಡಿ.

ಸೋ ನೀವು ತಯಾರಲ್ಲ ಚಳಿಗಾಲ ಎದುರಿಸೋದಿಕ್ಕೆ!! ಹ್ಯಾಪಿ ಚಳಿಗಾಲ!!

Monday, June 16, 2008

ತುಳಸಿ-ಕೆಲ ಉಪಯೋಗಗಳು


ಪೂಜಿಸಲೆಂದೇ ಹೂಗಳ ತಂದೇ
ದರುಶನ ಕೋರಿ ನಾ ನಿಂದೇ
ತೆರೆಯೋ ಬಾಗಿಲನು ರಾಮಾ
ಅಂತ ಇಂಪಾಗಿ ಹಾಡನ್ನು ನೀವು ನೋಡಿರುತ್ತೀರಿ ಇಲ್ಲ ಕೇಳಿರುತ್ತೀರಿ,ಮೈ ತುಂಬಾ ರೇಶಿಮೆ ಸೀರೆ ಉಟ್ಟು ಬೆಳಬೆಳಗ್ಗೆ ತುಳಸಿ ಗಿಡಕ್ಕೆ ಕಲ್ಪನಾ ಪೂಜೆ ಮಾಡುವ ದೃಶ್ಯವನ್ನು ನಾವು ಹೇಗೆ ತಾನೇ ಮರೆಯಲಾದೀತು,ಹೌದು ಅದು ಬಹಳ ಹಿಂದೇನಲ್ಲ ಈಗೊಂದು ಎರದು ದಶಕಗಳಿಗೂ ಮುಂಚೆ ಪ್ರತಿ ಮನೆಯ ಎದುರು ನೀವು ದಿನಾ ಬೆಳಗ್ಗೆ ಈ ದೃಶ್ಯವನ್ನು ಕಾಣ ಬಹುದಿತ್ತು,ಆದ್ರೆ ಈಗ ತುಳಸಿಯನ್ನು ಹುಡುಕುವುದೇ ಕಷ್ಟ ಇನ್ನದರ ಪೂಜೆಯ ಕಲ್ಪನೆಯಂತು ದೂರದ ಮಾತು, ಹಳ್ಳಿಯಲ್ಲಿ ಈಗಲೂ ಕೆಲವೊಂದು ಮನೆಗಳು ಇರಬಹುದು. ನಾವ್ಯಾಕೆ ತುಳಸಿಯ ಕೆಲ ಆಯುರ್‍ ವೇದದ ಗುಣಗಳನ್ನು ತಿಳಿಯ ಬಾರದು?

ಹೆಸರು-ತುಳಸಿ,ಮಂಜರಿ/ ಕೃಷ್ಣ ತುಲಸಿ,ತುಳಶಿ,ತ್ರಿತ್ತವು,ಹೋಲಿ ಬೇಸಿಲ್

ಇದು Labiateae ಕುಟುಂಬಕ್ಕೆ ಸೇರಿದೆ, ಇದರ ವೈಜ್ಞಾನಿಕ ಹೆಸರು Ocimum sanctum.

ತುಳಸಿ ಕಹಿ,ಒಗರು ಮತ್ತು ಉಷ್ಣ ಗುಣ ಹೊಂದಿದೆ,ಇದರ ಎಲೆ,ಬೀಜ ಮತ್ತು ಬೇರುಗಳನ್ನು ಆಯುರ್ ವೇದದ ಹಲವು ಔಷಧಗಳಲ್ಲಿ ಉಪಯೋಗಿಸಲಾಗುತ್ತಿದೆ.ತುಳಸಿಯ ಉಪಯೋಗವನ್ನು ಅದರಲ್ಲೂ ವಿಶೇಷವಾಗಿ ಹಿಂದೆ ಬಳಕೆಯಲ್ಲಿದ್ದ ಮನೆ ಔಷಧಗಳನ್ನು ತಿಳಿಯೋಣ.

ತುಲಸಿಯನ್ನ ನರ ವ್ಯೂಹದ ಚುರುಕಿಗಾಗೂ ಉಪಯೋಗಿಸಲಾಗುತ್ತಿದೆ,ಇದರಿಂದ ಜ್ಞಾಪಕ ಶಕ್ತಿಯ ವೃದ್ಧಿಯಾಗುವುದು.

ಉಪಯೋಗಗಳು ಮತ್ತು ಬಳಕೆ(ತುಲಸಿ ಎಲೆಯು ಕಟು ಘಮವನ್ನು ಹೊಂದಿರುತ್ತದೆ),

೧.ಒತ್ತದ ಮತ್ತು ಕೋಪ ನಿರ್ವಹಣೆ
ದಿನಾ ಬೆಳಗ್ಗೆ ಮತ್ತು ರಾತ್ರಿ ಊಟದ ನಂತರ ೧೦ ರಿಂದ ೧೨ ಎಲೆಗಳನ್ನ ಸೇವಿಸಿದರೆ ರಕ್ತ ಶುದ್ಧಿ ಹಾಗೂ ಕೋಪ ಒತ್ತಡ ಗಮನಾರ್ಹವಾಗಿ ಕಮ್ಮಿಯಾಗುವುದು.ನಿಮಗೆ ಗೊತ್ತೇ? ನಾವು ದೇವಸ್ಥಾನದಲ್ಲಿ ಕುಡಿಯುವ ತೀರ್ಥದಲ್ಲಿ ತುಲಸಿ ಎಲೆಯನ್ನ ಹಾಕಿರುತ್ತಾರೆ.ಅದರ ಮೂಲ ಉದ್ದೇಶವೂ ಇದೇ ಆಗಿರಬೇಕು.

೨.ಜ್ವರ ಮತ್ತು ಥಂಡಿ
ನಮ್ಮನೇಲಿ ಅಪ್ಪ ನಾವು ಸಣ್ಣಕ್ಕಿದ್ದಾಗ ಜ್ವರ ಆದ್ರೆ ಸಾಕು, ತುಳಸಿಯನ್ನ ತಿನ್ನಿಸ್ತಿದ್ರು,ಅಮ್ಮ ತುಳಸಿದೇ ಕಷಾಯ ಮಾಡಿ ಕುಡಿಸ್ತಾ ಇದ್ರು,ಮಳೆಗಾಲದಲ್ಲಿ ನಾನಾ ತರದ ಜ್ವರಗಳು ಜಾಸ್ತಿ, ಅದಕ್ಕೆ ನಾವು ಏನು ಮಾಡ್ಬಹುದು ಗೊತ್ತೇ?
ತುಲಸಿಯ ೨-೩ ಚಿಗುರು ಕುಡಿಗಳನ್ನ ಕಪ್ಪು ಟೀಗೆ ಹಾಕಿ ಕುಡಿದರೆ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ,ಜ್ವರ ಬರುವುದನ್ನ ತಡೆಯುವುದು.
ಜ್ವರ ಬಂದೇ ಬಿಟ್ಟಿದೆಯಾ, ತುಳಸಿಯ ರಸವನ್ನ ಯಾಲಕ್ಕಿ ಪುಡಿಯೊಂದಿಗೆ ಕುದಿಸಿ ಹಾಲಿನೊಂದಿಗೆ ತೆಗೆದುಕೊಳ್ಳಬೇಕು,ತುಳಸಿ ರಸ-೧ಕಪ್, ಯಾಲಕ್ಕಿ ಪುಡಿ-೧ ಚಮಚ, ೧ ಲೋಟ ನೀರು ಬೆರಸಿ ಕುದಿಸಿ ಅರ್ಧಕ್ಕಿಳಿಸಿ, ಇದಕ್ಕೆ ಸಕ್ಕರೆ ಮತ್ತು ಅರ್ಧ ಲೋಟ ಹಾಲು ಬೆರೆಸಿ,ಇದನ್ನು ದಿನಕ್ಕೆ ನಾಲ್ಕರಿಂದ ಐದು ಬಾರಿ ಕುಡಿಯಬೇಕು.
ತುಳಸಿಯ ಹಸಿ ರಸ ಕೂಡ ಜ್ವರ ಇಳಿಸಲು ಉಪಯೋಗವಾಗುವುದು,ತುಳಸಿ ಎಲೆಯ ನಿತ್ಯ ಸೇವನೆ ಶ್ವಾಸಕೋಶದ ಹಲವಾರು ಕಾಯಿಲೆಗಳಿಂದ ದೂರವಿಡುತ್ತದೆ.

೩.ಗಂಟಲು ಕೆರೆತ
ಕುದಿಸಿದ ಬಿಸಿ ನೀರಿಗೆ ತುಲಸಿ ಕುಡಿ ಹಾಕಿ ಬಾಯಿ ಮುಕ್ಕಳಿಸಬೇಕು,ತುಳಸಿ ಎಲೆಯನ್ನ ನಿಧಾನಕ್ಕೆ ಅಗಿಯ ಬೇಕು,
ಇದು ಬಾಯಿ ವಾಸನೆಯಲ್ಲು ಉಪಯೋಗಕ್ಕೆ ಬರುವುದು,ನಾಲಗೆಯ ಕಹಿ ತೆಗೆಯುವುದು, ಊಟದ ರುಚಿ,ಹಸಿವು ಹೆಚ್ಚಿಸುವುದು.

೪.ಕೆಮ್ಮು,ಉಸಿರಾಟದ ತೊಂದರೆಗಳು
ಉಸಿರಾಟದ ವ್ಯವಸ್ಥೆಗೆ ತುಲಸಿ ಒಂದು ಅಮೃತ ಸಮಾನ,ಈಗ ಮಾರುಕಟ್ಟೆಯಲ್ಲಿರುವ ಮುಕ್ಕಾಲು ಭಾಗ ಕಾಫ಼್-ಸಿರಪ್ ಗಳಲ್ಲಿ ತುಲಸಿಯನ್ನು ಉಪಯೋಗಿಸಲಾಗಿರುತ್ತದೆ.ತುಳಸಿಯೊಂದಿಗೆ ಜೇನುತುಪ್ಪ ಮತ್ತು ಶುಂಠಿರಸದ ಮಿಶ್ರಣವು ಅದ್ಭುತವಾಗಿ ಕೆಲಸ ಮಾಡುತ್ತದೆ.

೫.ಚರ್ಮದ ತೊಂದರೆ
ರಿಂಗ್ ವರ್ಮ್ ಗೆ ತುಳಸಿಯ ರಸ ಹಚ್ಚುವದರಿಂದ ವಾಸಿಯಾಗುವುದು,
ಹಾಗೇ ಮೊದವೆ,ಕಲೆಗಳಿಗೆ ಇದರ ರಸದೊಂದಿಗೆ ಸೌತೇರಸ ಕಡಲೇ ಹಿಟ್ಟು ಜೇನುತುಪ್ಪ ಸೇರಿಸಿದ ಫ಼ೇಸ್-ಪ್ಯಾಕ್ ಪ್ರತಿ ಎರಡು ದಿನಗಳಿಗೊಮ್ಮೆ ಹಚ್ಚುತ್ತಾ ಬಂದರೆ ಕಾಂತಿಯುಕ್ತ ಮುಖ ನಿಮ್ಮದಾಗುವುದು, ಸ್ನಾನದ ನೀರಲ್ಲಿ ತುಳಸಿ ಕುಡಿಯನ್ನ ಹಾಕಿ ಸ್ನಾನ ಮಾಡಿದರೆ ಶರೀರ ರೋಗರಹಿತವಾಗುವುದು.
ಇದಷ್ಟೇ ಅಲ್ಲ ಹೃದಯದ ತೊಂದರೆ,ಕಿಡ್ನಿ ತೊಂದರೆ,ಅರೆ ತಲೆನೋವು ಮುಂತಾದ ನೂರಕ್ಕು ಹೆಚ್ಚು ರೋಗಗಳನ್ನ ವಾಸಿ ಮಾಡುವ ಸಾಮರ್ಥ್ಯ ಈ ಗಿಡಕ್ಕಿದೆ, ಇದು ನಿಜವಾದ ಅರ್ಥದಲ್ಲಿ ಸಂಜೀವಿನಿ, ಇದರ ಇನ್ನೂ ಕೆಲ ಉಪಯೋಗಗಳನ್ನ ಆಗಾಗ ತಿಳಿದುಕೊಳ್ಳೋಣ,ಇವತ್ತಿಗೆ ಇದಿಷ್ಟು ಅಷ್ಟೇ.ಇನ್ಯಾಕೆ ತಡ,ಆದಷ್ಟು ಬೇಗ ಮನೆ ಅಂಗಳದಲ್ಲೊಂದು ತುಲಸಿ,ನಾವು ಉಸಿರಾಡುವ ಗಾಳಿಯನ್ನ ಸೋಸಿ ಕೊಡುವ ಈ ಪವಿತ್ರ ಗಿಡಕ್ಕೆ ನಮೋನ್ನಮ: