Monday, June 16, 2008

ತುಳಸಿ-ಕೆಲ ಉಪಯೋಗಗಳು


ಪೂಜಿಸಲೆಂದೇ ಹೂಗಳ ತಂದೇ
ದರುಶನ ಕೋರಿ ನಾ ನಿಂದೇ
ತೆರೆಯೋ ಬಾಗಿಲನು ರಾಮಾ
ಅಂತ ಇಂಪಾಗಿ ಹಾಡನ್ನು ನೀವು ನೋಡಿರುತ್ತೀರಿ ಇಲ್ಲ ಕೇಳಿರುತ್ತೀರಿ,ಮೈ ತುಂಬಾ ರೇಶಿಮೆ ಸೀರೆ ಉಟ್ಟು ಬೆಳಬೆಳಗ್ಗೆ ತುಳಸಿ ಗಿಡಕ್ಕೆ ಕಲ್ಪನಾ ಪೂಜೆ ಮಾಡುವ ದೃಶ್ಯವನ್ನು ನಾವು ಹೇಗೆ ತಾನೇ ಮರೆಯಲಾದೀತು,ಹೌದು ಅದು ಬಹಳ ಹಿಂದೇನಲ್ಲ ಈಗೊಂದು ಎರದು ದಶಕಗಳಿಗೂ ಮುಂಚೆ ಪ್ರತಿ ಮನೆಯ ಎದುರು ನೀವು ದಿನಾ ಬೆಳಗ್ಗೆ ಈ ದೃಶ್ಯವನ್ನು ಕಾಣ ಬಹುದಿತ್ತು,ಆದ್ರೆ ಈಗ ತುಳಸಿಯನ್ನು ಹುಡುಕುವುದೇ ಕಷ್ಟ ಇನ್ನದರ ಪೂಜೆಯ ಕಲ್ಪನೆಯಂತು ದೂರದ ಮಾತು, ಹಳ್ಳಿಯಲ್ಲಿ ಈಗಲೂ ಕೆಲವೊಂದು ಮನೆಗಳು ಇರಬಹುದು. ನಾವ್ಯಾಕೆ ತುಳಸಿಯ ಕೆಲ ಆಯುರ್‍ ವೇದದ ಗುಣಗಳನ್ನು ತಿಳಿಯ ಬಾರದು?

ಹೆಸರು-ತುಳಸಿ,ಮಂಜರಿ/ ಕೃಷ್ಣ ತುಲಸಿ,ತುಳಶಿ,ತ್ರಿತ್ತವು,ಹೋಲಿ ಬೇಸಿಲ್

ಇದು Labiateae ಕುಟುಂಬಕ್ಕೆ ಸೇರಿದೆ, ಇದರ ವೈಜ್ಞಾನಿಕ ಹೆಸರು Ocimum sanctum.

ತುಳಸಿ ಕಹಿ,ಒಗರು ಮತ್ತು ಉಷ್ಣ ಗುಣ ಹೊಂದಿದೆ,ಇದರ ಎಲೆ,ಬೀಜ ಮತ್ತು ಬೇರುಗಳನ್ನು ಆಯುರ್ ವೇದದ ಹಲವು ಔಷಧಗಳಲ್ಲಿ ಉಪಯೋಗಿಸಲಾಗುತ್ತಿದೆ.ತುಳಸಿಯ ಉಪಯೋಗವನ್ನು ಅದರಲ್ಲೂ ವಿಶೇಷವಾಗಿ ಹಿಂದೆ ಬಳಕೆಯಲ್ಲಿದ್ದ ಮನೆ ಔಷಧಗಳನ್ನು ತಿಳಿಯೋಣ.

ತುಲಸಿಯನ್ನ ನರ ವ್ಯೂಹದ ಚುರುಕಿಗಾಗೂ ಉಪಯೋಗಿಸಲಾಗುತ್ತಿದೆ,ಇದರಿಂದ ಜ್ಞಾಪಕ ಶಕ್ತಿಯ ವೃದ್ಧಿಯಾಗುವುದು.

ಉಪಯೋಗಗಳು ಮತ್ತು ಬಳಕೆ(ತುಲಸಿ ಎಲೆಯು ಕಟು ಘಮವನ್ನು ಹೊಂದಿರುತ್ತದೆ),

೧.ಒತ್ತದ ಮತ್ತು ಕೋಪ ನಿರ್ವಹಣೆ
ದಿನಾ ಬೆಳಗ್ಗೆ ಮತ್ತು ರಾತ್ರಿ ಊಟದ ನಂತರ ೧೦ ರಿಂದ ೧೨ ಎಲೆಗಳನ್ನ ಸೇವಿಸಿದರೆ ರಕ್ತ ಶುದ್ಧಿ ಹಾಗೂ ಕೋಪ ಒತ್ತಡ ಗಮನಾರ್ಹವಾಗಿ ಕಮ್ಮಿಯಾಗುವುದು.ನಿಮಗೆ ಗೊತ್ತೇ? ನಾವು ದೇವಸ್ಥಾನದಲ್ಲಿ ಕುಡಿಯುವ ತೀರ್ಥದಲ್ಲಿ ತುಲಸಿ ಎಲೆಯನ್ನ ಹಾಕಿರುತ್ತಾರೆ.ಅದರ ಮೂಲ ಉದ್ದೇಶವೂ ಇದೇ ಆಗಿರಬೇಕು.

೨.ಜ್ವರ ಮತ್ತು ಥಂಡಿ
ನಮ್ಮನೇಲಿ ಅಪ್ಪ ನಾವು ಸಣ್ಣಕ್ಕಿದ್ದಾಗ ಜ್ವರ ಆದ್ರೆ ಸಾಕು, ತುಳಸಿಯನ್ನ ತಿನ್ನಿಸ್ತಿದ್ರು,ಅಮ್ಮ ತುಳಸಿದೇ ಕಷಾಯ ಮಾಡಿ ಕುಡಿಸ್ತಾ ಇದ್ರು,ಮಳೆಗಾಲದಲ್ಲಿ ನಾನಾ ತರದ ಜ್ವರಗಳು ಜಾಸ್ತಿ, ಅದಕ್ಕೆ ನಾವು ಏನು ಮಾಡ್ಬಹುದು ಗೊತ್ತೇ?
ತುಲಸಿಯ ೨-೩ ಚಿಗುರು ಕುಡಿಗಳನ್ನ ಕಪ್ಪು ಟೀಗೆ ಹಾಕಿ ಕುಡಿದರೆ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ,ಜ್ವರ ಬರುವುದನ್ನ ತಡೆಯುವುದು.
ಜ್ವರ ಬಂದೇ ಬಿಟ್ಟಿದೆಯಾ, ತುಳಸಿಯ ರಸವನ್ನ ಯಾಲಕ್ಕಿ ಪುಡಿಯೊಂದಿಗೆ ಕುದಿಸಿ ಹಾಲಿನೊಂದಿಗೆ ತೆಗೆದುಕೊಳ್ಳಬೇಕು,ತುಳಸಿ ರಸ-೧ಕಪ್, ಯಾಲಕ್ಕಿ ಪುಡಿ-೧ ಚಮಚ, ೧ ಲೋಟ ನೀರು ಬೆರಸಿ ಕುದಿಸಿ ಅರ್ಧಕ್ಕಿಳಿಸಿ, ಇದಕ್ಕೆ ಸಕ್ಕರೆ ಮತ್ತು ಅರ್ಧ ಲೋಟ ಹಾಲು ಬೆರೆಸಿ,ಇದನ್ನು ದಿನಕ್ಕೆ ನಾಲ್ಕರಿಂದ ಐದು ಬಾರಿ ಕುಡಿಯಬೇಕು.
ತುಳಸಿಯ ಹಸಿ ರಸ ಕೂಡ ಜ್ವರ ಇಳಿಸಲು ಉಪಯೋಗವಾಗುವುದು,ತುಳಸಿ ಎಲೆಯ ನಿತ್ಯ ಸೇವನೆ ಶ್ವಾಸಕೋಶದ ಹಲವಾರು ಕಾಯಿಲೆಗಳಿಂದ ದೂರವಿಡುತ್ತದೆ.

೩.ಗಂಟಲು ಕೆರೆತ
ಕುದಿಸಿದ ಬಿಸಿ ನೀರಿಗೆ ತುಲಸಿ ಕುಡಿ ಹಾಕಿ ಬಾಯಿ ಮುಕ್ಕಳಿಸಬೇಕು,ತುಳಸಿ ಎಲೆಯನ್ನ ನಿಧಾನಕ್ಕೆ ಅಗಿಯ ಬೇಕು,
ಇದು ಬಾಯಿ ವಾಸನೆಯಲ್ಲು ಉಪಯೋಗಕ್ಕೆ ಬರುವುದು,ನಾಲಗೆಯ ಕಹಿ ತೆಗೆಯುವುದು, ಊಟದ ರುಚಿ,ಹಸಿವು ಹೆಚ್ಚಿಸುವುದು.

೪.ಕೆಮ್ಮು,ಉಸಿರಾಟದ ತೊಂದರೆಗಳು
ಉಸಿರಾಟದ ವ್ಯವಸ್ಥೆಗೆ ತುಲಸಿ ಒಂದು ಅಮೃತ ಸಮಾನ,ಈಗ ಮಾರುಕಟ್ಟೆಯಲ್ಲಿರುವ ಮುಕ್ಕಾಲು ಭಾಗ ಕಾಫ಼್-ಸಿರಪ್ ಗಳಲ್ಲಿ ತುಲಸಿಯನ್ನು ಉಪಯೋಗಿಸಲಾಗಿರುತ್ತದೆ.ತುಳಸಿಯೊಂದಿಗೆ ಜೇನುತುಪ್ಪ ಮತ್ತು ಶುಂಠಿರಸದ ಮಿಶ್ರಣವು ಅದ್ಭುತವಾಗಿ ಕೆಲಸ ಮಾಡುತ್ತದೆ.

೫.ಚರ್ಮದ ತೊಂದರೆ
ರಿಂಗ್ ವರ್ಮ್ ಗೆ ತುಳಸಿಯ ರಸ ಹಚ್ಚುವದರಿಂದ ವಾಸಿಯಾಗುವುದು,
ಹಾಗೇ ಮೊದವೆ,ಕಲೆಗಳಿಗೆ ಇದರ ರಸದೊಂದಿಗೆ ಸೌತೇರಸ ಕಡಲೇ ಹಿಟ್ಟು ಜೇನುತುಪ್ಪ ಸೇರಿಸಿದ ಫ಼ೇಸ್-ಪ್ಯಾಕ್ ಪ್ರತಿ ಎರಡು ದಿನಗಳಿಗೊಮ್ಮೆ ಹಚ್ಚುತ್ತಾ ಬಂದರೆ ಕಾಂತಿಯುಕ್ತ ಮುಖ ನಿಮ್ಮದಾಗುವುದು, ಸ್ನಾನದ ನೀರಲ್ಲಿ ತುಳಸಿ ಕುಡಿಯನ್ನ ಹಾಕಿ ಸ್ನಾನ ಮಾಡಿದರೆ ಶರೀರ ರೋಗರಹಿತವಾಗುವುದು.
ಇದಷ್ಟೇ ಅಲ್ಲ ಹೃದಯದ ತೊಂದರೆ,ಕಿಡ್ನಿ ತೊಂದರೆ,ಅರೆ ತಲೆನೋವು ಮುಂತಾದ ನೂರಕ್ಕು ಹೆಚ್ಚು ರೋಗಗಳನ್ನ ವಾಸಿ ಮಾಡುವ ಸಾಮರ್ಥ್ಯ ಈ ಗಿಡಕ್ಕಿದೆ, ಇದು ನಿಜವಾದ ಅರ್ಥದಲ್ಲಿ ಸಂಜೀವಿನಿ, ಇದರ ಇನ್ನೂ ಕೆಲ ಉಪಯೋಗಗಳನ್ನ ಆಗಾಗ ತಿಳಿದುಕೊಳ್ಳೋಣ,ಇವತ್ತಿಗೆ ಇದಿಷ್ಟು ಅಷ್ಟೇ.ಇನ್ಯಾಕೆ ತಡ,ಆದಷ್ಟು ಬೇಗ ಮನೆ ಅಂಗಳದಲ್ಲೊಂದು ತುಲಸಿ,ನಾವು ಉಸಿರಾಡುವ ಗಾಳಿಯನ್ನ ಸೋಸಿ ಕೊಡುವ ಈ ಪವಿತ್ರ ಗಿಡಕ್ಕೆ ನಮೋನ್ನಮ:

No comments: